Daily archive

June 04, 2020

ಮೋಹದ ಬತ್ತಿ ಯಾವತ್ತೋ ಉರಿದು ಮುಗಿದು ಹೋಗಿದೆ…

in ಬಾಟಮ್ ಐಟಮ್

ಬಾಟಮ್ ಐಟಮ್:

ಮೋಹದ ಬತ್ತಿ ಯಾವತ್ತೋ ಉರಿದು ಮುಗಿದು ಹೋಗಿದೆ…

ನಿಮ್ಮ ಆಫೀಸಿನ ಪಕ್ಕದ ಟೇಬಲ್ಲಿನಲ್ಲೇ ಒಬ್ಬಾತ ನಾಗಭೂಷಣ ಅಂತ ಕೂತಿರ್ತಾನೆ ಅಂದುಕೊಳ್ಳಿ. ಆತನಿಗೆ ಸಾಹಿತ್ಯ ಅರ್ಥವಾಗಲ್ಲ. ಸಂಗೀತ ಅಲರ್ಜಿ. ಸ್ವಲ್ಪ sense of  humour ಕಡಿಮೆ. ಆದರೆ ನಿಮಗೆ ಗುಲ್ಜಾರ್ ಅಂದ್ರೆ ಇಷ್ಟ. ತೇಜಸ್ವಿ ನಿಮ್ಮ ಫೇವರಿಟ್. ಅರ್ಜೆಂಟಾಗಿ ನೀವು ಗುಲಾಮ್ ಅಲಿಯ ಗಝಲಿನ ಬಗ್ಗೆ discuss ಮಾಡಬೇಕು ಅಂತ ಚಡಪಡಿಸುತ್ತಿದ್ದೀರಿ. ಒಂದು ಜೋಕು ನಿಮ್ಮೊಳಗಿನಿಂದ ಪಕಪಕಾ ಅಂತ ಉಬುಕಿ ಬರುತ್ತಿದೆ. ಪಕ್ಕದ ಟೇಬಲ್ಲಿನ ನಾಗಭೂಷಣನಿಗೆ ಇವ್ಯಾವೂ ಅರ್ಥವಾಗುವುದಿಲ್ಲ. ನೀವು ಏನು ಮಾಡುತ್ತೀರಿ?


ನಿಮ್ಮ ಜಾಗದಲ್ಲಿ ನಾನಿದ್ದಿದ್ದರೆ ನಾಗಭೂಷಣನನ್ನೂ ಒಂದು ಜೋಕನ್ನಾಗಿ ಮಾಡಿಕೊಂಡು ಪಕಪಕಾಂತ ನಕ್ಕು ಸುಮ್ಮನಾಗುತ್ತಿದ್ದೆ. ಅದೇ ಸರಿ. ಆದರೆ ನಾಗಭೂಷಣನ ಟೇಬಲ್ಲಿಗೆ ಸಂಗೀತ, ಸಾಹಿತ್ಯ, ಜೋಕು ಎಲ್ಲವೂ ಅರ್ಥವಾಗುವ ಇನ್ನೊಬ್ಬ ವ್ಯಕ್ತಿಯನ್ನು ತಂದು ಕೂರಿಸುತ್ತಿರಲಿಲ್ಲ. Am I right?

‘ಹಾಗಾದರೆ ನೀನ್ಯಾಕೆ ನಿನ್ನ ಹೆಂಡತಿಗೆ ಸಾಹಿತ್ಯ ಸಂಗೀತ ಅರ್ಥವಾಗಲ್ಲ: ಅದರಲ್ಲಿ ಆಕೆಗೆ ಆಸಕ್ತಿಯಿಲ್ಲ ಅನ್ನೋ ಕಾರಣಕ್ಕೆ ಇನ್ನೊಬ್ಬ ಹೆಂಗಸಿನೊಂದಿಗೆ ಸಂಬಂಧವಿಟ್ಟುಕೊಂಡಿದೀಯ?’ ಅಂತ ಎದುರಿಗೆ ಕುಳಿತ ಗೆಳೆಯನನ್ನು ಕೇಳಿದೆ.

‘ಇದೇನು ಹಿಂಗಂತೀಯ? ಹೆಂಡತಿ ಮತ್ತು ನಾಗಭೂಷಣ ಇಬ್ರೂ ಒಂದೇನಾ?’ ಅಂತ ಗೆಳೆಯ ತಿರುಗಿಬಿದ್ದು ಕೇಳಿದ.

ನಾನು ನಗತೊಡಗಿದೆ. ಹೆಂಡತಿ ಅಲ್ಲದ ಇನ್ನೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದಾದರೆ ಇಟ್ಟುಕೋ. ಆದರೆ ಅದಕ್ಕೆ ಸಾಹಿತ್ಯ, ಸಂಗೀತ, ಟೇಸ್ಟು, ಹಾಳು-ಮೂಳು ಅಂತ ಕಾರಣ ಹೇಳಬೇಡ. ಹೆಂಡತಿಯ ಜೊತೆಗೆ ಕಳೆಯೋದಕ್ಕಿಂತ ಹೆಚ್ಚಿನ ಹೊತ್ತನ್ನು ನಾವು ಆಫೀಸಿನ ಪಕ್ಕದ ಟೇಬಲ್ಲಿನ ನಾಗಭೂಷಣನೊಂದಿಗೆ ಕಳೆಯುತ್ತಿರುತ್ತೇವೆ. ಬಸ್ಸುಗಳಲ್ಲಿ ಪರಕೀಯರ ಪಕ್ಕದಲ್ಲಿ, ಬಾರುಗಳಲ್ಲಿ ಅಪರಿಚಿತರೊಂದಿಗೆ, ಬೀದಿಯಲ್ಲಿ, ಥೇಟರಿನಲ್ಲಿ, ಕ್ಯೂಗಳಲ್ಲಿ, ಆಟೋಗಳಲ್ಲಿ ಇಡೀ ದಿನ ಯಾರ್‍ಯಾರೊಂದಿಗೋ ಕಳೆಯುತ್ತಿರುತ್ತೇವೆ. ಮನೆಗೆ ಹಿಂತಿರುಗಿದರೆ ತುತ್ತು ಊಟ, ಇಂತಿಷ್ಟು ಹೊತ್ತಿಗೆ ಹೆಂಡತಿಯೊಂದಿಗೆ ಮನ ವ್ಯಾಯಾಮ, ರಾತ್ರಿ ದೊಡ್ಡ ನಿದ್ರೆ, ಹಗಲು ಒಡೆಯುತ್ತಿದ್ದಂತೆಯೇ ನ್ಯೂಸ್ ಪೇಪರು, ಆಮೇಲೆ ಅದೇ ಆಫೀಸು ಮತ್ತು ನಾಗಭೂಷಣ! ಇದೆಲ್ಲ ರೊಟೀನಿನ ನಡುವೆಯೇ ನಮ್ಮನ್ನು ಒಂಚೂರು ಸಾಹಿತ್ಯ, ಒಂಚೂರು ಸಂಗೀತ, ಜೋಕು, ಭಾವುಕತೆ-ಮುಂತಾದವು ಸುಮ್ಮನೆ ತಾಕಿ ಹೋಗುತ್ತಿರುತ್ತವೆ. Of course, ಕೊಂಚ ಭಾವುಕರಾದವರಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೆ, ಬರೆದುಕೊಳ್ಳುವುದಕ್ಕೆ, ಹರಟೆಗೆ, ನಗಲಿಕ್ಕೆಒಂದು ಕಂಪೆನಿ ಅಂತ ಬೇಕಾಗಬಹುದು. ಇದು ಕೂಡ ನಮ್ಮ ಇಡೀ ದಿನದ part time ನೆಸೆಸಿಟಿಯೇ ಹೊರತು, ನಾವು ಇಡೀ ದಿನ ಸಾಹಿತ್ಯದ ಕುರಿತು ಮಾತಾಡುತ್ತ ಕೂಡುವುದು ಸಾಧ್ಯವಿಲ್ಲ.

ಆದರೆ ಒಂದು ಸ್ತರದ, ಒಂದು ವರ್ಗದ ಜನರ ಪೈಕಿ ಈ ತರಹದ ಮದುವೆಯಾಚೆಗಿನ ಸಂಬಂಧವಿಟ್ಟುಕೊಂಡವರನ್ನು ಕರೆದು ಕೇಳಿನೋಡಿ? ಅವರ್‍ಯಾರೂ ‘ನನ್ನ ಹೆಂಡತಿ ಮಾಡುವ ಅಡುಗೆ ರುಚಿಯಾಗಿರಲ್ಲವಾದ್ದರಿಂದ ಇನ್ನೊಬ್ಬಳೊಂದಿಗೆ ಸಂಬಂಧ ಇಟ್ಕೊಂಡಿದೀನಿ’ ಅಂತ ಹೇಳುವುದಿಲ್ಲ. ಹಾಗೆ ಸಂಬಂಧವಿಟ್ಟುಕೊಂಡ ಗಂಡಸರ girl friendಗಳನ್ನು ಕೇಳಿನೋಡಿ?

‘ಅವರ ಹೆಂಡ್ತಿ ಅವರನ್ನ ಅರ್ಥ ಮಾಡಿಕೊಳ್ಳೋದೇ ಇಲ್ವಂತೆ. ಇವರು ತುಂಬ ಸೂಕ್ಷ್ಮ. ಆಕೆ ಕೈಗೆ ಸಿಕ್ಕು ತುಂಬ ನೊಂದುಬಿಟ್ಟಿದಾರೆ. ಇವರ ಮನಸ್ಸಿಗೆ ಸಮಾಧಾನ ಆಗೋದಾದ್ರೆ ಆಗಲಿ ಅಂತ ನಾನೂ ಒಪ್ಕೊಂಡಿದೀನಿ’ ಎಂಬ ಉತ್ತರವನ್ನು ಗರ್ಲ್ ಫ್ರೆಂಡುಗಳು ಕೊಡುತ್ತಾರೆ.

ಇಬ್ಬರೂ ಸುಳ್ಳರೇ. ಸಾಹಿತ್ಯ ಅರ್ಥವಾಗಲ್ಲ ಅನ್ನೋ ಕಾರಣಕ್ಕೆ ಇನ್ನೊಬ್ಬಾಕೆಯ ಜೊತೆ ಸಂಬಂಧವಿಟ್ಟುಕೊಂಡೆ ಅನ್ನುವವನೂ ಸುಳ್ಳ. ಅವರ ಹೆಂಡ್ತಿ ಅವರನ್ನ ಅರ್ಥ ಮಾಡ್ಕೊಳಲ್ಲವಾದ್ದರಿಂದ ನಾನು ಆತನ ಜೊತೆ ಸಂಬಂಧ ಇಟ್ಕೊಂಡು ಸಮಾಧಾನ ಕೊಡ್ತಿದೀನಿ ಅನ್ನುವವಳೂ ಸುಳ್ಳಿಯೇ. ಇಂಥ ಸಂಬಂಧಗಳೊಳಕ್ಕೆ ಕೊಂಚ ಇಣುಕಿ ನೋಡಿದರೆ, ಅಲ್ಲಿ ಸಾಹಿತ್ಯವೆಂಬುದು ಆಡಿ ಬಿಸಾಡಿದ ಆಟಿಗೆಯಂತೆ ಮೂಲೆಯಲ್ಲಿ ಬಿದ್ದಿರುತ್ತದೆ. ಈಕೆ ಅರ್ಥ ಮಾಡಿಕೊಂಡ ಆ ಗಂಡಸಿನ ‘ಸೂಕ್ಷ್ಮ’ ಮನಸ್ಸು ಯಥಾಪ್ರಕಾರ ಬೆಡ್‌ರೂಮಿನಲ್ಲಿ ಬೆತ್ತಲೆ ಬಿದ್ದುಕೊಂಡಿರುತ್ತದೆ. ‘ನಮ್ಮಿಬ್ಬರ ಮಧ್ಯೆ sex ಅನ್ನೋದು ಅಸಲು ಮುಖ್ಯ ವಿಷಯವೇ ಆಗಿಲ್ಲ. ನಮ್ಮದು ಬೌದ್ದಿಕ ಸ್ನೇಹ. ಮನೋಸಾಂಗತ್ಯ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ಮನೋದಂಪತಿಗಳು’ ಅಂತೆಲ್ಲ ಮಾತಾಡುತ್ತಿರುತ್ತಾರಲ್ಲ? ಅವರಿಗೆ ಹೇಳಿ. ‘ನಿಮ್ಮದು ಬೌದ್ಧಿಕ ಸ್ನೇಹವೇ ಆಗಿದ್ದಿದ್ದರೆ ಇಡೀ ದಿನ ಲೈಬ್ರರಿಯಲ್ಲಿ ಕುಳಿತು ಎದ್ದು ಹೋಗುತ್ತಿದ್ದಿರಿ. ಕೋಣೆಗಳ ಪ್ರೈವೆಸಿಯಲ್ಲಲ್ಲ!’ ಅಂತ.

Extra marital ಸಂಬಂಧಗಳನ್ನಿಟ್ಟುಕೊಂಡ ಎಲ್ಲರೂ ಅದಕ್ಕೆ sexual ಅಲ್ಲದ, ಕೆಲವೊಮ್ಮೆ ಲೌಕಿಕವೂ ಅಲ್ಲದ ಒಂದಲ್ಲ ಒಂದು ಕಾರಣ ಕೊಡುತ್ತಿರುತ್ತಾರೆ. ಲೈಂಗಿಕತೆಗೆ ಸಂಬಂಧಿಸಿದಂತೆ ಕೊಡುವ ಕಾರಣಗಳಾದರೂ ಕೂಡ ತುಂಬ fake ಆದ ಕಾರಣಗಳಿರುತ್ತವೆ. ಮದುವೆಯಾಚೆಗಿನ ಸಂಬಂಧವಿಟ್ಟುಕೊಂಡ ಹೆಂಗಸರಲ್ಲಾದರೂ ಕೆಲವರು ಸಿನ್ಸಿಯರ್ ಆಗಿರುವವರು ಸಿಗುತ್ತಾರೆ. ಆದರೆ ಗಂಡಸರಲ್ಲಿ ಹೆಚ್ಚಿನವರು ವಂಚಕರು. ‘ನನ್ನ ಹೆಂಡತಿಗೂ ನನಗೂ ಒಂದು ಚೂರು ಆಗಲ್ಲ’ ಎಂಬಂತೆ ಆ ಮೂರನೆಯವಳನ್ನು ನಂಬಿಸಿರುತ್ತಾರೆ. ಮನೆಗೆ ಹೋಗಿ ನೋಡಿದರೆ, ಹೆಂಡತಿಯೊಂದಿಗೆ ಚೆನ್ನಾಗಿಯೇ ಇರುತ್ತಾರೆ. ‘ನಾನು ಇಂಥದೊಂದು ಮದುವೆಯಾಚೆಗಿನ ಸಂಬಂಧವನ್ನು ಇಟ್ಟುಕೊಳ್ಳಲಿಕ್ಕೆ ಬೇರೆ ಏನೂ ಕಾರಣವಿಲ್ಲ. ನನಗೆ ಆಕೆ ಬೇಕು. ಆಕೆಗೆ ನಾನು ಬೇಕು. ಅದಕ್ಕೋಸ್ಕರ ನಾವು ಸಂಬಂಧವಿಟ್ಟುಕೊಂಡಿದ್ದೇವೆ!’ ಅಂತ ಪ್ರಾಮಾಣಿಕವಾಗಿ ಮಾತನಾಡುವವರನ್ನು ನಾನು ನೋಡಿಲ್ಲ. ಪ್ರತಿಯೊಬ್ಬರೂ ಒಂದು ಕಾರಣ, ಒಂದು ನೆಪ, ಒಂದು ಸಮರ್ಥನೆ ಕೊಡುತ್ತಾರೆ. ಆ ಎಲ್ಲ ನೆಪಗಳೂ ಹೆಂಡಂದಿರ ಮೇಲೆ ಅವರು ಮಾಡಿದ ಆಪಾದನೆಗಳೇ ಆಗಿರುತ್ತವೆ. ಈ ವಿಷಯದಲ್ಲಿ ಹೆಂಗಸರು ಕೂಡ ಅಷ್ಟೆ.

ಇಷ್ಟಕ್ಕೂ ಒಂದು ಅನೈತಿಕ ಸಂಬಂಧ ಹುಟ್ಟಿಕೊಳ್ಳುತ್ತದಾದರೂ ಏಕೆ ಅಂತ ಹುಡುಕುತ್ತ ಹೋದರೆ, ಅಸಲು ನೈತಿಕವಾದ ಮದುವೆಯೊಳಗಿನ ಸಂಬಂಧವೇ ಪೂರ್ತಿಯಾಗಿ ಗಟ್ಟಿಗೊಂಡಿರುವುದಿಲ್ಲ ಎಂಬ ಸಂಗತಿ ಸ್ಪಷ್ಟವಾಗುತ್ತ ಹೋಗುತ್ತದೆ. ‘ಇಷ್ಟು ವರ್ಷ ಇಲ್ಲದ್ದು ಇವತ್ತೇಕೆ ನನ್ನ ಗಂಡ ಇಂಥ ಕೆಲಸ ಮಾಡಿದ? ‘ ಅಂತ ಕೇಳುವ ಹೆಣ್ಣುಮಕ್ಕಳಿಗೆ ನಾನು ಅನೇಕ ಸಲ ಉತ್ತರ ಕೊಟ್ಟಿದ್ದೇನೆ. ಇಷ್ಟು ವರ್ಷ ಆತನಿಗೆ ಇಂಥ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇಷ್ಟು ವರ್ಷ ಆತನಿಗೆ ನಿಮ್ಮ ಮೇಲಿನ ಮೋಹ ತೀರಿರಲಿಲ್ಲ. ಅದನ್ನು ನೀವು ಪ್ರೀತಿ ಅಂದುಕೊಂಡಿದ್ದಿರಿ. ಆತ ಇವತ್ತಿಗೂ ಮಕ್ಕಳನ್ನು ಪ್ರೀತಿಸುತ್ತಾನೆ. ನಿಮಗೆ ಹೆದರುತ್ತಾನೆ. ನಿಮ್ಮ ಮೇಲೆ ಪ್ರೀತಿ ಇನ್ನೂ ಇದೆ ಎಂಬಂತೆ ನಟಿಸುತ್ತಾನೆ. ಮೋಹದ ಬತ್ತಿ ಯಾವತ್ತೋ ಉರಿದು ಮುಗಿದುಹೋಗಿದೆ! ಇಷ್ಟೆಲ್ಲ ಆದಮೇಲೂ ಆತ ‘ನಿಮ್ಮೊಂದಿಗೂ’ ಯಾಕೆ ಇದ್ದಾನೆಂದರೆ, ಅದು ಡಿಪೆಂಡೆನ್ಸು! ನೀವು ಮಾಡಿದ ಅಡುಗೆಯ ಹೊರತು ಆತನಿಗೆ ಬೇರೆಯವಳ ಅಡುಗೆ ಇಷ್ಟವಾಗುವುದಿಲ್ಲ. ಬಟ್ಟೆ ನೀವು ಒಗೆದರೇನೇ ಸರಿ. ಮಕ್ಕಳನ್ನು ಬೇರೆಯವಳ ಕೈಗೆ ಸಾಕಲು ಆತ ಕೊಡಲಾರ. ತೀರ ಖಾಯಿಲೆ ಬಿದ್ದರೆ, ಆಕೆಯನ್ನು ನೆನೆಯುತ್ತಲೇ ನಿಮ್ಮಿಂದ ಸೇವೆ ಮಾಡಿಸಿಕೊಳ್ಳುತ್ತಾನೆ! ಈ ತರಹದ ಹತ್ತು ಹಲವು ಕಾರಣಗಳು ನಿಮ್ಮ ಮದುವೆಯನ್ನು ಹಿಡಿದಿಟ್ಟಿವೆಯೇ ಹೊರತು ಮೋಹದ ಕಾಲ ಮುಗಿದು ಹೋಗಿದೆ! ಹಾಗಂತ ಅನೇಕರಿಗೆ ನೇರವಾಗಿ ಹೇಳಿದ್ದೇನೆ.

‘ಆ ಮುಗಿದು ಹೋದ ಮೋಹ ಕಾಲವನ್ನು ಮತ್ತೆ ತಂದುಕೊಳ್ಳುವುದು ಹೇಗೆ?’ ಅಂತ ಅವರು ಕೇಳುತ್ತಾರೆ.

ಉತ್ತರಿಸುವುದು ಅಷ್ಟು ಸುಲಭವಲ್ಲ. ಮದುವೆಯೊಳಕ್ಕೆ understanding ತುಂಬಬಹುದು. ಹೊಂದಾಣಿಕೆ ತುಂಬಬಹುದು. ಯುದ್ಧವಿರಾಮ ತಂದಿಡಬಹುದು. ಒಂದೇ ಮನೆಯಲ್ಲಿ ಅಪರಿಚಿತರಂತೆ ಬಾಳುವುದನ್ನು ಕಲಿಸಬಹುದು. ಇಬ್ಬರೂ ಬುದ್ಧಿವಂತರಾದರೆ ಒಂದು ಶುದ್ಧ ಗೆಳೆತನ ನೆಲೆಗೊಳಿಸಿಕೊಳ್ಳಬಹುದು. ಆದರೆ ಪ್ರೀತಿಯನ್ನು ತಂದು ತುಂಬುವುದು ಎಲ್ಲಿಂದ? ಮೋಹದ ಬಟ್ಟಲು ತುಂಬಿಸುವುದಾದರೂ ಹೇಗೆ?

ಇವು ಉತ್ತರಿಸಲಾಗದ ಪ್ರಶ್ನೆಗಳು.

-ರವೀ

Go to Top