ಹಾಯ್ ಬೆಂಗಳೂರ್

ಬೆಳಗೆರೆ ಕೃಷ್ಣ ಶಾಸ್ತ್ರಿ: ಅವರು ಎಂದೂ ಮರೆಯಲಿಲ್ಲ: ಭಾಗ-10

  • ಬೆಳಗೆರೆ ಕೃಷ್ಣ ಶಾಸ್ತ್ರಿ

ಅವರು ಎಂದೂ ಮರೆಯಲಿಲ್ಲ: ಭಾಗ-10

ಅವರ ಮನೇಲೂ ಹಾಡಿದ್ದೇ ಹಾಡು, ಕುಡಿದದ್ದೇ ಕಾಫಿ… ಎಷ್ಟು ಸಲ ಎಂಬುದು ಲೆಕ್ಕಕ್ಕಿಲ್ಲ!

ಆ ವ್ಯಕ್ತಿನ `ಹೆಸರೇನಪ್ಪ ನಿಂದೂ’ ಅಂತ ಕೇಳಿದ್ದಾರೆ.

`ಖಾದರ್ ಖಾನ್’ ಎಂದು ಹೇಳಿ ಸುಮ್ಮನಾಗಿದ್ದಾರೆ.

`ಏನ್ ಕೆಲ್ಸ ಮಾಡ್ತಿಯಪ್ಪ?’

`ಸಬ್ ಇನ್‌ಸ್ಪೆಕ್ಟರ್’

-ಅದನ್ನು ಕೇಳಿ ನಮ್ಮ ತಂದೆ `ನೋಡಮ್ಮಾ ಇವನನ್ನು ನಂಬೋಕ್ಕಾಗಲ್ಲ. ಕಳ್ಳನನ್ನು ಹುಡುಕಿಕೊಂಡು ಹೊರಟುಬಿಟ್ರೆ ನನಗೆ ಕಾಫಿ ಕೊಡೋರ್‍ಯಾರು?’ ನಾನು ಬಂದಾಗಲೆಲ್ಲಾ ಕಾಫಿ ಕೊಡಬೇಕು, ಎಂದೆಲ್ಲ ತಮಾಷೆ ಮಾಡಿ ಸಾಕಷ್ಟು ಹೊತ್ತಾದ ಮೇಲೆ ಮಠಕ್ಕೆ ಬಂದಿದ್ದಾರೆ.

ಹೀಗೆ ಅವರ ಮನೆಗೆ ಹೋಗಿ ಕಾಫಿ ಕುಡಿಯೋದು, ಹಾಡು ಹೇಳೋದು ಅಭ್ಯಾಸವಾಗಿ ಬಿಟ್ಟಿದೆ. ಇದು ಹೇಗೋ ಮಠದವರಿಗೆ ಗೊತ್ತಾಗಿ ಒಂದು ಸಂಜೆ `ಯಾಕ್ ನೀವು ಸಬ್ ಇನ್‌ಸ್ಪೆಕ್ಟರ್ ಮನೆಗೆ ಆಗಾಗ ಹೋಗ್ತಿರ?’ ಎಂತಲೂ ಕೇಳಿಬಿಟ್ಟಿದ್ದಾರೆ.

`ಕಾಫಿ ಕುಡಿಯೋಕೆ… ಯಾಕೆ ಹೋಗಬಾರದಾ?’ ಕೇಳಿದ್ದಾರೆ ನಮ್ಮಪ್ಪ.

`ಅಲ್ರಿ… ಮಾತೆತ್ತಿದರೆ ಉಪನಿಷತ್ತು, ಭಗವದ್ಗೀತೆ ಹೇಳ್ತಿರಿ, ಮುಸಲ್ಮಾನರ ಮನೇಲಿ ಕಾಫಿ ಕುಡಿತೀರಲ್ರಿ’ ಸ್ವಲ್ಪ ಜಬರದಸ್ತಿನಿಂದಲೇ ಕೇಳಿದ್ದಾರೆ ಮಠದವರು.

`ಓ… ಹೊ… ಹೊ… ನೀವ್ಯಾರು ಮುಸಲ್ಮಾನರ ಮನೇಲಿ ಕಾಫಿ ಕುಡಿಯಲ್ವೋ? ಹಾಗೆ ಹೇಳಿ. ಅವರ ಮನೆ ಒಳಗಡೆ ಮಾಡುವ ಕಾಫಿ ಕುಡಿದು ನೋಡಿ.. ಬನ್ನಿ ಕೊಡುಸ್ತೀನಿ. ಅವ್ರು ಹೆಂಗ್ ಮಾಡ್ತಾರೆ ಅಂತ ಆಮೇಲೆ ಮಾತಾಡಿ’. ಇತ್ತ ಮಠದವರು ಮಡಿ ಮೈಲಿಗೆ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇವರಿಗೆ ತಮಾಷೆ. ಹೀಗೇ ಮಾತಿಗೆ ಮಾತು ಬಂದು `ಏನ್ರೀ ಕೊರಳಲ್ಲಿ ಜನಿವಾರ ಹಾಕ್ಕೊಂಡು ಬಾಯಿಗೆ ಬಂದಾಗೆಲ್ಲಾ ಮಾತಾಡ್ತೀರಿ’ ಎಂದೂ ಕೇಳಿಬಿಟ್ಟಿದ್ದಾರೆ.

ಮಧ್ಯೆ ಯಾರೋ, `ಇವರಿಗೆ ಬಹಿಷ್ಕಾರ ಹಾಕಬೇಕಾಗುತ್ತೆ’ ಎಂತಲೂ ಹೇಳಿದ್ದಾರೆ, ನಮ್ಮ ತಂದೆಗೆ ಇದು ಮತ್ತೂ ತಮಾಷೆಯಾಗಿ ಕಂಡಿದೆ.

`ಯಾರಿಗೆ ಹಾಕ್ತೀರಿ ಬಹಿಷ್ಕಾರ? ಮಾಧ್ವರಿಗ್ಹಾಗ್ತಿರೋ?’

`ಇಲ್ಲ ಅವ್ರು ಉಡುಪಿಯೋರಿಗೆ ಸಂಬಂಧ ಪಟ್ಟಿರೋರು’

`ಶ್ರೀವೈಷ್ಣವರಿಗೆ ಹಾಕ್ತಿರೋ?’

ಅದು ಮೇಲುಕೋಟೆಯೋರು ಹಾಕೋದು’

`ಹಾಗಾದ್ರೆ ನಿಮ್ಮ ಕಾಲಿಗ್ ಬಿದ್ದು, ಕಾಣಿಕೆ ಕೊಟ್ಟು-ನೀವು ನಮ್ಮ ಗುರುಗಳು ಅಂತ ಹೇಳೋರಿಗೆ ಬಹಿಷ್ಕಾರ ಹಾಕ್ತೀರೊ’… ಹೀಗೆ ಮಾತಿಗೆ ಮಾತು ಬೆಳೆದಿದೆ.

ಮತ್ತೆ ಯಾರೋ `ನೀವು ಕೊರಳಲ್ಲಿ ಜನಿವಾರ ಹಾಕ್ಕೊಂಡಿದ್ದು ಸಾರ್ಥಕ ಆಯ್ತು ಬಿಡಿ’ ಅಂದಿದ್ದಾರೆ.

`ಇಲ್ಲ, ಇವ್ರಿಗೆ ಬುದ್ಧಿ ಕಲಿಸಬೇಕೂಂದ್ರೆ ಬಹಿಷ್ಕಾರ ಹಾಕಲೇಬೇಕು’ ಎಂದಿದ್ದಾರೆ ಮತ್ತೊಬ್ಬರು. `ಆಹಾ… ಈಗ ನನಗೆ ಗೊತ್ತಾಯ್ತು-ನಿಮ್ಮ ಹಕ್ಕುದಾರಿಕೆ, ಅಧಿಕಾರ ಏನೂಂತ. ಈ ಜನಿವಾರದ ಹಂಗು ನಿಮ್ದಲ್ಲವೆ’ ಎಂದು ತಮ್ಮ ಮೈಮೇಲಿದ್ದ ಜನಿವಾರ ತೆಗೆದು `ತಗೊಳ್ಳಿ ಜನಿವಾರನ. ಹಾಕಿ ಅದಕ್ಕೆ ಬಹಿಷ್ಕಾರ’ ಎಂದರು. `ಈ ಸ್ಥಿತಿಗೆ ಇದು ಬರತ್ತೆ ಅಂತ ಗೊತ್ತಿದ್ದರೆ ಶಂಕರಾಚಾರ್ಯರು ಇಲ್ಲಿಗೆ ಬರ್‍ತಾನೂ ಇರ್‍ಲಿಲ್ಲ, ಈ ಮಠ ಸ್ಥಾಪನೇನೂ ಮಾಡ್ತಿರಲಿಲ್ಲ’.

`ಹೋಗ್ಲಿ ಬಿಡಿ ಸ್ವಾಮಿ… ಈಗ ನಾನು ಶೂದ್ರ, ಶೂದ್ರ ಸ್ವಾಮಿ. ನಾನು ಈ ಮಠದಲ್ಲಿರಬಾರದು. ನೀವು ಶೂದ್ರರಿಗೆ ಬಹಿಷ್ಕಾರ ಹಾಕಿ ನೋಡೋಣ’ ಎಂದು ಹೇಳಿ ಅಲ್ಲಿಂದ ಹೊರಟು ಚಿಕ್ಕಮಗಳೂರಿಗೆ ಬಂದುಬಿಟ್ಟಿದ್ದಾರೆ. ಅಲ್ಲಿ ಸೀತಾರಾಮಯ್ಯನವರಿಗೆ ಇದನ್ನೆಲ್ಲ ಹೇಳಿ, ಅವರ ಮನೆಯಲ್ಲಿ ಒಂದೆರಡು ದಿನ ಇದ್ದು ನಮ್ಮ ಮನೆಗೆ ಬಂದರು.

ನಾನು ಆಗ ದೇವನೂರಿನಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಹೆಡ್ ಮಾಸ್ಟರ್ ಹೇಳಿ ಕಳಿಸಿದರು. ಆಗಷ್ಟೆ ನಾನು ರೂಮಿನಲ್ಲಿ ಅಡುಗೆಗೆ ಇಟ್ಟಿದ್ದೆ. ಊಟ ಮುಗಿಸಿ ಅಲ್ಲಿಗೆ ಹೋದರೆ, ಅವರು `ಅಜ್ಜ ಅವ್ರಿಗೆ ಜನಿವಾರ ಎಲ್ಲೋ ಬಿದ್ದು ಹೋಗಿದೆ, ಷರಟು ತೆಗೆಯುವಾಗಲೋ ನದೀಲಿ ಸ್ನಾನ ಮಾಡೊವಾಗಲೋ. ನಾನು ಹೊಸದೊಂದು ಜನಿವಾರ ತಂದಿಟ್ಟಿದ್ದೀನಿ ತಗೊಳ್ಳಿ, ಯಾರಾದ್ರೂ ನೋಡೋಕೆ ಮುಂಚೆ ಹಾಕ್ಕೊಳ್ಳಕ್ಕೇಳಿ’ ಎಂದರು. ನನಗೆ ನಮ್ಮ ತಂದೆಯ ಚರ್ಯೆಗಳೆಲ್ಲಾ ಗೊತ್ತಿದ್ದಿದ್ದೆ. ಮನೇಲಿರೊವಾಗೆಲ್ಲಾ ಜನಿವಾರವನ್ನು ತೆಗೆದು ಗೂಟಕ್ಕೆ ಹಾಕಿಬಿಡುತ್ತಿದ್ದರು. ಯಾರಾದರೂ ಮಡಿವಂತ ಜನ ಮನೆಗೆ ಬಂದರೆ `ಅದೇನೊ ನೋಡೋ ನೇತಾಡ್ತಿದೆ’ ಎಂದು ತಮಾಷೆ ಮಾಡುತ್ತಿದ್ದರು. ಹೀಗಾಗಿ ಜನಿವಾರ ಹೊರಗೆ ಬಂದರೂ ಹಾಕ್ಕೊಂಡಿಲ್ಲ ಎಂದರೆ ಏನೋ ವಿಷಯ ಇರಬೇಕು ಎಂದು `ತಡೀರಿ ಸಾರ್ ವಿಚಾರ ಮಾಡಿ ನೋಡ್ತಿನಿ’ ಎಂದು ನಾನು ಕೇಳಿದ್ದಕ್ಕೆ ಈ ಕಥೆನ್ನೆಲ್ಲಾ ಹೇಳಿದರು.

(ಮುಂದುವರೆಯುವುದು)

Leave a Reply

Your email address will not be published. Required fields are marked *